ಅಮ್ಮ ಹೇಳಿದ ... ಪುಸ್ತಕಕ್ಕೆ ೫೦ ನೇ ಮುದ್ರಣದ ಸಂಭ್ರಮ
ನನ್ನ ಮೊದಲ ಪುಸ್ತಕ ಹೊರಬಂದದ್ದು ೨೦೦೬ ರಲ್ಲಿ . ಅವತ್ತು ಪುಸ್ತಕ ಮಾರಾಟದ ಬಗ್ಗೆ ಏನೆಂದರೆ ಏನೂ ಗೊತ್ತಿರಲಿಲ್ಲ . ಪುಸ್ತಕ ಪ್ರಕಟ ಆದ ನಂತರ, ನಾವು ಮಾರಾಟ ಮಾಡ್ತೇವೆ ಎಂದು ಬಂದ ಕೆಲವರು ಪುಸ್ತಕಗಳ ಜೊತೆಗೇ ಮಾಯವಾದರು.ಅವತ್ತಿನ ನಷ್ಟವನ್ನು ಲೆಕ್ಕ ಹಾಕಿ ಮುಂದೆ ಯಾವತ್ತೂ ಪುಸ್ತಕ ಪ್ರಕಟಿಸಬಾರದು ಅಂತ ನಿರ್ಧರಿಸಿದ್ದೆ . ೩ ವರ್ಷದ ನಂತರ " ಅಮ್ಮ ಹೇಳಿದ ಎಂಟು ಸುಳ್ಳುಗಳು " ಪುಸ್ತಕ ಪ್ರಕಟಿಸಬೇಕು ಅನ್ನಿಸಿದಾಗ ಕನ್ನಡದ ೯ ಪ್ರಕಾಶಕರ ಮುಂದೆ ಹಸ್ತಪ್ರತಿ ಹಿಡಿದುಕೊಂಡು ನಿಂತೆ. ನೀವು ನಂಬುವುದಿಲ್ಲ;ಪುಸ್ತಕ ಪ್ರಕಟಿಸಲು ಅವತ್ತು ಯಾರೂ ಮುಂದೆ ಬರಲಿಲ್ಲ!
ಇದು ಮಾರಾಟ ಆಗಲ್ಲ ಮಣಿಕಾಂತ್ ಎಂದು ತುಂಬಾ ಸ್ಪಷ್ಟವಾಗಿ ಹೇಳಿಬಿಟ್ಟರು. ಈ ಪುಸ್ತಕ ಮಾಡುವ ರಗಳೆಯೇ ಬೇಡ ಎಂದುಕೊಂಡು ನಾನು ಕೈ ಚೆಲ್ಲಿ ಕೂತಿದ್ದಾಗ ವಿಪ್ರೋದಲ್ಲಿ ಇಂಜಿನಿಯರ್ ಆಗಿದ್ದ ಹಿರಿಯ ಮಿತ್ರ ಶ್ರೀನಿವಾಸ್ ವೆಂಕಟರಾಮ್ - ೧೫ ಸಾವಿರ ರುಪಾಯಿ ಸಾಲ ಕೊಡ್ತೇನೆ . ೧೦೦ ಪ್ರತಿಗಳನ್ನು ತಗೊಳ್ತೇನೆ. ನೀವು ಬುಕ್ ಮಾಡಿ ಎಂದು ಆಸೆ ಹುಟ್ಟಿಸಿದರು.
ಹೊಸ ಕನಸು ಚಿಗುರೊಡೆದದ್ದೇ ಆಗ . ನನ್ನ ಮಗಳು ನೀಲಿ ಯ ಹೆಸರಿನ ಜೊತೆಗೆ ಅಮ್ಮ ಎಂಬುದನ್ನೂ ಪುಟ್ಟದಾಗಿ ತಿಳಿಸುವ " ಮಾ" ಎಂಬ ಅಕ್ಷರ ಇಟ್ಟುಕೊಂಡು ನೀಲಿಮಾ ಪ್ರಕಾಶನದಲ್ಲಿ ಅಮ್ಮ ಹೇಳಿದ ಎಂಟು ಸುಳ್ಳುಗಳು ಪುಸ್ತಕ ಹೊರತಂದೆ .
ಆ ನಂತರ ನಡೆದಿರುವ ಪ್ರತಿಯೊಂದೂ ನನ್ನ ಪಾಲಿಗೆ ಅಚ್ಚರಿಯೇ .
ಪುಸ್ತಕ ನನ್ನ ನಿರೀಕ್ಷೆಯನ್ನು ಮೀರಿ ತುಂಬಾ ವೇಗವಾಗಿ ಮಾರಾಟ ಆಯಿತು . ಸೇಡಂ ನ ಅಮ್ಮ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಪುಸ್ತಕಕ್ಕೆ ಒಲಿದುಬಂದವು . ಹುಟ್ಟು ಹಬ್ಬದ ಖುಷಿಗೆ, ಮದುವೆಯ ಸಡಗರಕ್ಕೆ ಈ ಪುಸ್ತಕವನ್ನು ಕಾಣಿಕೆಯಾಗಿ ಕೊಡುವ ಅಭ್ಯಾಸ ಶುರುವಾಯಿತು . ಪುಸ್ತಕ ಓದಿದವರು ಮರುಗಳಿಗೆಯೇ ಅಮ್ಮನನ್ನು , ಅವಳ ಪ್ರೀತಿಯನ್ನು,ತ್ಯಾಗವನ್ನು,ಸಂಕಟವನ್ನು ನೆನಪಿಸಿಕೊಂಡು ಬಿಕ್ಕಿದರು.ಬದುಕಿರುವವರೆಗೂ ಅಮ್ಮನನ್ನು ಚೆನ್ನಾಗಿ ನೋಡ್ಕೊತೇವೆ ಎಂದು ಪ್ರಾಮಿಸ್ ಮಾಡಿದರು. ಆ ಪುಸ್ತಕ ಬರೆದಿದ್ದಕ್ಕೆ ನಿಮಗೆ ಸ್ಪೆಷಲ್ ಥ್ಯಾಂಕ್ಸ್ ಎಂದೂ ಸೇರಿಸಿದರು .
ಇದನ್ನೆಲ್ಲಾ ಯಾಕೆ ಹೇಳಿದೆ ಅಂದರೆ ,ಅಮ್ಮ ಹೇಳಿದ ... ಪುಸ್ತಕ ಇವಾಗ ೫೦ ನೇ ಮುದ್ರಣ ಕಾಣುತ್ತಿದೆ. ಒಂದು ಮುದ್ರಣ ಅಂದರೆ ಒಂದು ಸಾವಿರ ಪ್ರತಿಗಳು ಮಾತ್ರ. ೫೦೦೦೦ ಆದ ಪುಸ್ತಕದ ಮೊದಲ ಪ್ರತಿಯನ್ನು ಕೈಗೆ ಎತ್ತಿಕೊಳ್ಳುವ ಮುನ್ನ ಈ ಖುಷಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.
ನನಗೆ ಅಕ್ಷರ ಕಲಿಸಿದ ,ಬೆಳೆಸಿದ,ಶುಭ ಹಾರೈಸಿದ ,ತಪ್ಪು ಮಾಡಿದಾಗ ತಿದ್ದಿದ,ಪುಸ್ತಕ ಖರೀದಿಸಿ ಅದನ್ನು ಎಲ್ಲ ಮನಸ್ಸುಗಳಿಗೂ ತಲುಪಿಸಿದ ಬಂಧುಗಳಿಗೆ, ಪುಸ್ತಕ ಮಾರಾಟ ಮಾಡಿದ ಎಲ್ಲ ಪುಸ್ತಕ ವ್ಯಾಪಾರಿಗಳಿಗೆ ವಂದನೆ .
ಪ್ರೀತಿಯಿಂದ
ಮಣಿಕಾಂತ್
No comments:
Post a Comment