Friday, December 7, 2012

 ಅಮಾಯಕ



ಹಿಂಸಾತ್ಮಕ ಚಟುವಟಿಕೆಗಳಲ್ಲಿ ದಾಳಗಳಾಗಿ ಕೊನೆಗೆ ಶಿಕಾರಿ ಆಗುವ ಎಲ್ಲ ಯುವಕ ಯುವತಿಯರ ಹಿಂದೆ ಪೋಷಕರ ಕಣ್ಣೀರಿನ ಕಥೆ ಇರುತ್ತವೆ. ಎನ್‌ಕೌಂಟರ್‌ನಲ್ಲಿ ಸಾವಿಗೀಡಾದ ಉಮೇಶ್ ಮತ್ತು ಗಲ್ಲಿಗೇರಿದ ಕಸಬ್ ಹಿಂದೆಯೂ ಇಂಥ ಕಥೆಗಳಿವೆ. ಮೇಲಿನ ಚಿತ್ರದಲ್ಲಿ ರೋದಿಸುತ್ತಿರುವುದು ಹತ್ಯೆಗೀಡಾದ ನತದೃಷ್ಟ ಉಮೇಶನ ತಾಯಿ.



ಆರೇಳು ವರ್ಷಗಳ ಹಿಂದೆ ಮೂಡಿಗೆರೆ ತಾಲ್ಲೂಕಿನ ಸಬ್ಲಿ ಎಂಬ ಕಾಲೊನಿಯ ಆ ಪುಟ್ಟ ಮನೆಯ ಮುಂದೆ ನೂರಾರು ಜನ ನೆರೆದಿದ್ದರು. ಹಿಂದಿನ ದಿನ ಎನ್‌ಕೌಂಟರ್‌ನಿಂದ ಪ್ರಾಣ ಬಿಟ್ಟಿದ್ದ ಕಾಲೊನಿಯ ಯುವಕ ಉಮೇಶನ ಶವವನ್ನು ಹೊತ್ತ ಪೊಲೀಸ್ ವ್ಯಾನ್ ಆಗಷ್ಟೇ ಅಲ್ಲಿಗೆ ಬಂದಿತ್ತು.
ಚಿಕ್ಕವಾದರೂ ಚೊಕ್ಕಟವಾಗಿದ್ದ ಅಲ್ಲಿನ ಮನೆಗಳು, ವಿಶಾಲವಾದ ರಸ್ತೆ, ವಿದ್ಯುತ್ ಸೌಲಭ್ಯದಿಂದ ಇಡೀ ಜಿಲ್ಲೆಗೇ ಅತಿ ದೊಡ್ಡ ಪರಿಶಿಷ್ಟ ಕಾಲೊನಿ ಎನಿಸಿಕೊಂಡ ಸಬ್ಲಿಯ ಜನ ಹೇಗೆ ತಾವು ನೋಡನೋಡುತ್ತಿದ್ದಂತೆಯೇ ಮುಖ್ಯವಾಹಿನಿ ಸೇರಿಕೊಂಡರು ಎಂಬುದರಿಂದ ಹಿಡಿದು, ಪ್ರತಿ ಬಾರಿ ಹೀಗೆ ಎನ್‌ಕೌಂಟರ್‌ಗಳು ನಡೆದಾಗಲೂ ಸರ್ಕಾರ ಪ್ಯಾಕೇಜ್‌ಗಳನ್ನು ಘೋಷಿಸಿ ಅದು ಹೇಗೆ ಕೈತೊಳೆದುಕೊಂಡು ಬಿಡುತ್ತದೆ ಎಂಬುದರವರೆಗೆ ಅಲ್ಲಲ್ಲಿ ಗುಂಪು ಗುಂಪಾಗಿ ನಿಂತಿದ್ದ ಜನ ಚರ್ಚಿಸುತ್ತಿದ್ದರು.
ಪೊಲೀಸರು, ಮಾಧ್ಯಮದವರಂತೂ ಅದು ತಮ್ಮ ಜನ್ಮಸಿದ್ಧ ಹಕ್ಕೇನೋ ಎಂಬಂತೆ ಆ ಮನೆಯ ಒಳಗೇ ಬೀಡುಬಿಟ್ಟಿದ್ದರು. ಚಿಕ್ಕ ಹಾಲ್‌ನ ಮೂಲೆಯಲ್ಲಿದ್ದ ಮರದ ಬೆಂಚೊಂದರ ಮೇಲೆ ಕಾಲು ಕೊಕ್ಕರಿಸಿಕೊಂಡು ಮಲಗಿದ್ದ ಆ ಜೀವಕ್ಕೆ ಮಾತ್ರ ಇದ್ಯಾವುದರ ಪರಿವೆಯೂ ಇರಲಿಲ್ಲ. ಕರುಳಿನ ಸಂಕಟ ತಡೆಯಲಾರದೇ ಗಟ್ಟಿಯಾಗಿ ಹೊಟ್ಟೆ ಹಿಡಿದುಕೊಂಡು, ಬಿಗಿಯಾಗಿ ಕಣ್ಣು ಮುಚ್ಚಿಕೊಂಡಿದ್ದ ಆ ವೃದ್ಧೆಯ ಕೆನ್ನೆಯ ಮೇಲಿನಿಂದ ಕಣ್ಣೀರು ಸದ್ದಿಲ್ಲದೇ ಇಳಿಯುತ್ತಿತ್ತು. ಆಕೆ ಉಮೇಶನ ತಾಯಿ.
ಬಾತು ಹೋದ ಕೆನ್ನೆಯ ಅಪ್ಪ ಹಾಗೂ ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟಿದ್ದ, ಮುಗ್ಧತೆಯೇ ಮೈವೆತ್ತಂತಿದ್ದ ಉಮೇಶನ ತಮ್ಮ ಪೊಲೀಸರ ಅನುಮಾನದ ದೃಷ್ಟಿ ಮತ್ತು ಮಾಧ್ಯಮದವರ ಪ್ರಶ್ನೆಗಳ ಸುರಿಮಳೆ ಎದುರಿಸಲಾಗದೇ ಅಡುಗೆ ಕೋಣೆಯಲ್ಲಿ ತಬ್ಬಿಬ್ಬಾಗಿ ನಿಂತಿದ್ದರು.
ಅವರದು ಇಬ್ಬರು ಗಂಡು ಮಕ್ಕಳ ಪುಟ್ಟ ಸಂಸಾರ. ಬಡತನದಲ್ಲೇ ಬದುಕು ಕಟ್ಟಿಕೊಂಡವರು. ಮನೆಯಿಂದ ಮೂಡಿಗೆರೆ ಕಾಲೇಜಿಗೆ ಹೋಗಿ ಬರುತ್ತಿದ್ದ ಹಿರಿಯ ಮಗ ಉಮೇಶ ಕೆಲ ತಿಂಗಳ ಹಿಂದಷ್ಟೇ ಓದುವುದು ಬಿಟ್ಟು, ಬೇರೆ ಊರಲ್ಲಿ ಕೆಲಸಕ್ಕೆ ಸೇರಿದ್ದೇನೆ ಎಂದು ಹೇಳಿದ್ದ. ಆಗಾಗ್ಗೆ ಮನೆಗೆ ಬರುತ್ತಾ ಸಂಬಳದ ಬಾಬ್ತು ಎಂದು ಹೇಳಿ ತಾಯಿಯ ಕೈಗೊಂದಿಷ್ಟು ಹಣ ಇಟ್ಟು ಹೋಗುತ್ತಿದ್ದ.
`ಹೇಗೋ ಬದುಕಿಗೊಂದು ದಾರಿ ಕಂಡುಕೊಂಡ' ಎಂದುಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದವರಿಗೆ ಬರಸಿಡಿಲು ಬಡಿದಂತೆ `ನಿಮ್ಮ ಮಗ ನಕ್ಸಲ್, ಅವನು ನಮ್ಮ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ, ಇಗೊಳ್ಳಿ ಹೆಣ ತಂದಿದ್ದೇವೆ' ಎಂದು ಪೊಲೀಸರು ಬಂದು ಹೇಳಿದಾಗ ಆ ಹಿರಿಯ ಜೀವಗಳು ಭೂಮಿಗಿಳಿದು ಹೋಗಿದ್ದವು.
ಕೆಲಸಕ್ಕೆ ರಜೆ ಇತ್ತು ಎಂದು ಹೇಳಿ ಒಂದೆರಡು ವಾರಗಳ ಹಿಂದಷ್ಟೇ ಮನೆಗೆ ಬಂದಿದ್ದ ಮಗನಿಗೆ ಕೈಯಾರೆ ಊಟ ಬಡಿಸಿ `ಜಾಗ್ರತೆ ಮಗನೇ' ಎಂದು ಹೇಳಿ ಕಳುಹಿಸಿಕೊಟ್ಟಿದ್ದ ಆ ತಾಯಿಗೆ ಮಗನ ಸಾವಿನ ಸುದ್ದಿ ಕೇಳಿದಾಗ ಆದ ಆಘಾತ, ಏನೊಂದೂ ಮಾತನಾಡದೆ, ಯಾರನ್ನೂ ದೂಷಿಸದೆ ಮೌನವಾಗಿ ಕಣ್ಣೀರ‌್ಗರೆಯುತ್ತಿದ್ದ ಆ ದೃಶ್ಯ ನೋಡಿದವರ ಮನ ಹಿಂಡುವಂತಿತ್ತು.
ಮೊನ್ನೆ ಉಗ್ರ ಅಜ್ಮಲ್ ಕಸಾಬ್‌ನನ್ನು ಗಲ್ಲಿಗೇರಿಸಿದ ಸುದ್ದಿ ಕೇಳಿದ ಕೂಡಲೇ, ಉಮೇಶನ ಮನೆಯ ಅದೇ ಚಿತ್ರಣ ನನ್ನ ಕಣ್ಣೆದುರು ಗಕ್ಕನೇ ಬಂದು ನಿಂತಿತು. ಅಲ್ಲೆಲ್ಲೋ ದೂರದ ಪಾಕಿಸ್ತಾನದಲ್ಲಿ ಇದ್ದಿರಬಹುದಾದ ಅಂಥದ್ದೇ ಒಂದು ಪುಟ್ಟ ಮನೆಯಲ್ಲಿ ಆ ತಾಯಿಯೂ ಹೀಗೇ ಮಲಗಿರಬಹುದು. ಮಗನನ್ನು ನೇಣಿನ ಕುಣಿಕೆಗೆ ಒಡ್ಡಿದ ಸುದ್ದಿ ಕೇಳಿ ಹೀಗೆಯೇ ರೋದಿಸಿರಬಹುದು.
ಉಮೇಶನ ತಾಯಿಯಂತೆ ಅವಳ ಕರುಳೂ ಕಿತ್ತುಬಂದಂತೆ ಆಗಿರಬಹುದು. ಅವನ ಅಪ್ಪ ಮತ್ತು ಒಡಹುಟ್ಟಿದವರು ಸಮಾಜವನ್ನು ಎದುರಿಸಲಾಗದೇ ತಮ್ಮದಲ್ಲದ ತಪ್ಪಿಗಾಗಿ ಉಮೇಶನ ಮನೆಯವರಂತೆಯೇ ತಲೆ ತಗ್ಗಿಸಿ ನಿಂತಿರಬಹುದು ಎನಿಸಿ ಮನಸ್ಸು ಆರ್ದ್ರವಾಯಿತು. ಅಂದು ಉಮೇಶ, ಇಂದು ಕಸಾಬ್, ನಾಳೆ ಇನ್ಯಾರೋ? ಪಾತ್ರ ಮಾತ್ರ ಬದಲು ಅಷ್ಟೇ.
ಇಲ್ಲ, ನೂರಾರು ಜನರನ್ನು ಬಲಿ ತೆಗೆದುಕೊಂಡು ಎಷ್ಟೋ ಮನೆಗಳ ದೀಪವನ್ನೇ ನಂದಿಸಿದ ಕಸಾಬ್‌ನಂಥ ಉಗ್ರರಿಗೆ ಮರಣದಂಡನೆಯೇ ತಕ್ಕ ಶಿಕ್ಷೆ ಎನ್ನುವುದಾದರೆ ಅದಕ್ಕೆ ಅವನು ತಕ್ಕವನೇ ಸರಿ. ಅಪ್ಪ-ಅಮ್ಮನನ್ನು ಕಳೆದುಕೊಂಡ ಅದೆಷ್ಟೋ ಅನಾಥರನ್ನು ಸೃಷ್ಟಿಸಿದ, ನೂರಾರು ಹೆಣ್ಣು ಮಕ್ಕಳನ್ನು ವಿಧವೆಯರನ್ನಾಗಿ ಮಾಡಿದ, ಕೈಯಾರೆ ಮಕ್ಕಳನ್ನು ಮಣ್ಣು ಮಾಡಿ ಬಂದು ಹೆತ್ತವರು ತಮ್ಮ ಉಸಿರಿರುವವರೆಗೂ ನರಳುವಂತೆ ಮಾಡಿದ ಕಸಾಬ್‌ನಂತಹವರಿಗೆ ಅತ್ಯುಗ್ರ ಶಿಕ್ಷೆ ವಿಧಿಸಬೇಕಾದುದು ನ್ಯಾಯ ಸಹ.
ಆದರೆ, ಅಂತಹ ಕಟು ಉಗ್ರ ಮನಸ್ಸಿನ ಕಸಾಬ್‌ನೂ ಹಿಂದೊಮ್ಮೆ ನಮ್ಮೆಲ್ಲರ ಮನೆಯ ಮಕ್ಕಳಂತೆ ಮಗುವಾಗಿದ್ದವನೇ ಅಲ್ಲವೇ? ಉಮೇಶನ ಮನೆಯವರೂ ಒಳಗೊಂಡು ನಮ್ಮ ಸುತ್ತಮುತ್ತಲಿನ ಅದೆಷ್ಟೋ ಹೆತ್ತವರಂತೆ ಅವನ ಪಾಲಕರೂ ಮಗನ ಬಗ್ಗೆ ನೂರಾರು ಕನಸು ಕಟ್ಟಿಕೊಂಡಿದ್ದಿರಬಹುದು ಅಲ್ಲವೇ?
ಹಾಗಿದ್ದರೆ ಅದ್ಯಾವ ಕಾಲಘಟ್ಟದಲ್ಲಿ ಅವನ ಮುಗ್ಧತೆಯ ಪೊರೆ ಕಳಚಿ ಕ್ರೌರ್ಯದ ಪರದೆ ಆವರಿಸಿಕೊಂಡಿರಬಹುದು?ನಾಲ್ಕು ವರ್ಷಗಳ ಹಿಂದೆ ಮುಂಬೈ ದಾಳಿ ನಡೆದಾಗ ಸೆರೆ ಸಿಕ್ಕ ಏಕೈಕ ಉಗ್ರ ಕಸಾಬ್‌ನ ಮೂಲ ಜಾಲಾಡಿದಾಗ ಅವನು ಪಾಕಿಸ್ತಾನದ ಫರೀದ್‌ಕೋಟ್ ಗ್ರಾಮದವನು, ನಮ್ಮ ದೇಶದ ಲಕ್ಷಾಂತರ ಜನರಂತೆ ಸಾಮಾನ್ಯ ಬದುಕು ನಡೆಸುತ್ತಿದ್ದ ಅಲ್ಲಿನ ತಳ್ಳುಗಾಡಿ ವ್ಯಾಪಾರಿ ಅಮೀರ್ ಕಸಾಬ್‌ನ 6 ಮಕ್ಕಳಲ್ಲಿ ಒಬ್ಬ ಎಂಬುದು ಬೆಳಕಿಗೆ ಬಂದಿತ್ತು.
ದಾಳಿ ವಿಷಯ ತಿಳಿದು ಜಗತ್ತಿಗೆ ಮಾತ್ರವಲ್ಲ ಅವನ ಕುಟುಂಬಕ್ಕೂ ತೀವ್ರ ಆಘಾತವಾಗಿತ್ತು. ಈದ್ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲಿಲ್ಲವೆಂದು ಅಪ್ಪನ ಜೊತೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಮಗ, ತಾಯ್ನೆಲದಿಂದಲೇ ದೂರ ಹೋಗಿ ಅಂತಹ ಮಹಾನ್ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿಬಿಡಬಹುದು ಎಂಬ ಕಲ್ಪನೆ ತಾನೇ ಆ ಬಡ ಕುಟುಂಬಕ್ಕೆ ಹೇಗೆ ಬರಲು ಸಾಧ್ಯ?
ಅಷ್ಟೇ ಏಕೆ ಕೆಲವೇ ದಿನಗಳ ಹಿಂದೆ, ಬೆಂಗಳೂರಿನ ಕಚೇರಿಗಳಲ್ಲಿ ದುಡಿಯುವ ಸಾವಿರಾರು ಜನರಲ್ಲಿ ಒಬ್ಬರಾಗಿ ಇದ್ದುಕೊಂಡೇ ದುಷ್ಕೃತ್ಯದ  ಸಂಚು ರೂಪಿಸಿ ಸಿಕ್ಕಿ ಬಿದ್ದ ಶಂಕಿತ ಉಗ್ರ ಮಹಮದ್ ಸಿದ್ಧಿಕಿ ಮತ್ತು ಸಹಚರರ ಹಿನ್ನೆಲೆ ಬೆಳಕಿಗೆ ಬಂದಾಗಲೂ ಅವರನ್ನು ಹತ್ತಿರದಿಂದ ಕಂಡವರು ದಿಗ್ಭ್ರಾಂತರಾಗಿದ್ದರು.
ಸಾಮಾನ್ಯ ಕುಟುಂಬಗಳಿಂದ ಬಂದು, ಮೇಲ್ನೋಟಕ್ಕೆ ಎಷ್ಟೊಂದು ಮುಗ್ಧರಂತೆ ಕಾಣುತ್ತಿದ್ದ ಈ ಹುಡುಗರಲ್ಲಿ, ಮಾರಣಹೋಮ ನಡೆಸಿಬಿಡುವಂತಹ ಕ್ರೌರ್ಯ ಅದೆಲ್ಲಿ ಅಡಗಿರುತ್ತದೆ ಎನಿಸಿತ್ತು.
ಯಾಕೆ ಹೀಗೆ? ನಾಲ್ಕೈದು ವರ್ಷದ ನಮ್ಮ ಮಕ್ಕಳನ್ನೇ ಎಷ್ಟೋ ಬಾರಿ, ಬೇಕಾದಂತೆ ಬೆಳೆಸಲು ನಮಗೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಹೆತ್ತವರ ಎದೆಮಟ್ಟ ಬೆಳೆದುನಿಂತ ಮಕ್ಕಳು ಅದು ಹೇಗೆ ಸಂಚುಕೋರರ ಕೈಗೆ ಅಷ್ಟು ಸುಲಭದ ದಾಳಗಳಾಗಿ ಬಿಡುತ್ತಾರೆ? ಭಯೋತ್ಪಾದನೆ ಇರಬಹುದು, ನಕ್ಸಲ್ ಸಮಸ್ಯೆಯೇ ಆಗಿರಬಹುದು, ಒಟ್ಟಿನಲ್ಲಿ ಇದು ದಾರಿ ತಪ್ಪಿದ ಮಕ್ಕಳ ಕತೆ ಅಷ್ಟೇ.
ಇಂದಿಗೂ ಕಸಾಬ್‌ನಂತೆ ಸಣ್ಣಪುಟ್ಟ ಕಾರಣಕ್ಕೆ ಮನೆ ಬಿಟ್ಟು ಹೋಗುವ ಸಾಕಷ್ಟು ಮಂದಿ ನಮ್ಮ ನಡುವೆಯೂ ಇದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ, ಉತ್ತರ ಕರ್ನಾಟಕದ ಹಳ್ಳಿಗಳ ನೂರಾರು ಮಕ್ಕಳು ಸಣ್ಣಪುಟ್ಟ ನೆಪ ಹೇಳಿಕೊಂಡು ಊರು ಬಿಟ್ಟಿದ್ದಾರೆ. ದೂರದ ಊರಲ್ಲಿ ದುಡಿಯುತ್ತಿದ್ದೇವೆ ಎಂದು ಮನೆಯವರನ್ನು ನಂಬಿಸಿ ಕಾಡು ಪಾಲಾಗಿದ್ದಾರೆ, ನಾಡಲ್ಲೇ ಇದ್ದುಕೊಂಡು ವ್ಯವಸ್ಥೆಯ ವಿರುದ್ಧ ಷಡ್ಯಂತ್ರ ಹೊಸೆಯುವವರ ಗರಡಿ ಸೇರಿದ್ದಾರೆ.
ಮುಂದೊಂದು ದಿನ ಹೆಣವಾಗಿ ಮನೆಗೆ ಬಂದಾಗ ಅಥವಾ ಕಸಾಬ್‌ನಂತೆ ಕನಿಷ್ಠ ಹೆಣವೂ ಸಿಗಲಾರದಂತೆ ಆಗಿಹೋದಾಗಷ್ಟೇ ಅವರು ಸಾಗುತ್ತಿದ್ದ ಹಾದಿಯ ಸುಳಿವು ಮನೆಯವರಿಗೆ ಸಿಗುತ್ತದೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿರುತ್ತದೆ.
ಕೆಲವೊಮ್ಮೆ ಎಷ್ಟೋ ವರ್ಷ ಹೆತ್ತವರ ಸಂಪರ್ಕಕ್ಕೇ ಬಾರದೆ, ಸತ್ತೇಹೋಗಿದ್ದಾರೆ ಎಂದುಕೊಂಡಿದ್ದ ಮಕ್ಕಳು ಇಂತಹ ಸಮಾಜಘಾತುಕ ಶಕ್ತಿಗಳ ರೂಪದಲ್ಲಿ ಧುತ್ತನೇ ಅವತರಿಸಿದಾಗ ಅವರನ್ನು ಬರಮಾಡಿಕೊಳ್ಳುವ ಸ್ಥಿತಿಯಲ್ಲಿ ಮನೆಯವರೂ ಇರುವುದಿಲ್ಲ. ಅದು ನಮ್ಮದೇ ಕುಡಿ, ಆ ಶವದ ವಾರಸುದಾರರು ನಾವೇ ಎಂದು ಸಹ ಹೇಳಿಕೊಳ್ಳಲಾಗದ ದಯನೀಯ ಸ್ಥಿತಿಗೆ ಅವರು ಬಂದುಬಿಟ್ಟಿರುತ್ತಾರೆ.
ಇಂತಹವರ ರಕ್ತಸಂಬಂಧಿಗಳು ಎಂದು ಹೇಳಿಕೊಂಡು ಇತರ ಮಕ್ಕಳ ಬಾಳಿಗೂ ಕಲ್ಲು ಹಾಕಿಕೊಳ್ಳಲಾಗದೆ ಗಟ್ಟಿ ಮನಸ್ಸು ಮಾಡಿಕೊಂಡು, ಶವವನ್ನೇ ಪಡೆಯಲು ಹೋಗದಿರುವ ಉದಾಹರಣೆಗಳೂ ಸಾಕಷ್ಟಿವೆ. ಆದರೆ ಅಂತಹ ಕಠೋರ ನಿರ್ಧಾರಕ್ಕೆ ಬರುವ ಮುನ್ನ ಆ ಜೀವಗಳು ಎಂತಹ ಮೂಕವೇದನೆ ಅನುಭವಿಸಿರಬಹುದು ಎಂಬುದು ಮಾತ್ರ ಊಹೆಗೂ ನಿಲುಕದ ಸಂಗತಿ.
ಮೈಸೂರಿನ ಶ್ರೀಮಂತ ಮನೆತನದಲ್ಲಿ ಹುಟ್ಟಿ ದೆಹಲಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿಯುವಾಗ ಕ್ರಾಂತಿಯ ಹುಚ್ಚು ಹತ್ತಿಸಿಕೊಂಡು, ಪಶ್ಚಿಮಘಟ್ಟದಲ್ಲಿ ಬೇರೂರಲು ನಕ್ಸಲೀಯರಿಗೆ ನಕ್ಷೆ ರೂಪಿಸಿಕೊಟ್ಟಿದ್ದ ಸಾಕೇತ್ ರಾಜನ್ ಇದಕ್ಕೊಂದು ಜ್ವಲಂತ ಉದಾಹರಣೆ.
ಸ್ವತಃ ಕಾಡಿನೊಳಗೆ ಇದ್ದುಕೊಂಡು ಚಟುವಟಿಕೆಯನ್ನು ವ್ಯವಸ್ಥಿತವಾಗಿ ಮುನ್ನಡೆಸುತ್ತಿದ್ದ ಆ ಸಂಘಟನಾ ಚತುರನನ್ನು ಯಶಸ್ವಿ ಕಾರ್ಯಾಚರಣೆಯಲ್ಲಿ ಪೊಲೀಸರು ಗುಂಡೇಟಿನಿಂದ ಹೊಡೆದುರುಳಿಸಿದ್ದರು. ಆಗ ಹೋರಾಟ, ಕ್ರಾಂತಿಯೆಲ್ಲ ಏನಿದ್ದರೂ ಬಡವರ ಪಾಲಿಗಷ್ಟೇ ಎಂದುಕೊಂಡಿದ್ದ ಪ್ರಜ್ಞಾವಂತರು ಬೆಚ್ಚಿ ಬಿದ್ದಿದ್ದರು.
ಈ ಅನೂಹ್ಯ ಬೆಳವಣಿಗೆಯನ್ನು ಅರಗಿಸಿಕೊಳ್ಳಲಾಗದೇ `ಬುದ್ಧಿಜೀವಿಗಳ ವಲಯ' ತತ್ತರಿಸಿತ್ತು. ಸಮಾಜದ ಉದ್ಧಾರಕ್ಕಾಗಿ ಪ್ರಾಣತೆತ್ತ ಸಾಕೇತ್ ರಾಜನ್ ಒಬ್ಬ ನಾಯಕ, ಹೀಗಾಗಿ ಅವರ ಶವವನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಟ್ಟು ಮೆರವಣಿಗೆ ನಡೆಸಬೇಕು ಎಂದು ಆಗ್ರಹಿಸಿ ಇತ್ತ ರಾಜಧಾನಿಯಲ್ಲಿ `ಬುದ್ಧಿಜೀವಿಗಳು' ದೊಡ್ಡ ಹುಯಿಲು ಎಬ್ಬಿಸಿದ್ದರು.
ಆದರೆ ಅತ್ತ, ಜ್ವಾಲಾಮುಖಿಯನ್ನೇ ಒಡಲೊಳಗಿಟ್ಟುಕೊಂಡಿದ್ದರೂ ಮೇಲೆ ನಿರ್ಲಿಪ್ತತೆಯ ಮುಖವಾಡ ತೊಟ್ಟ ಸಾಕೇತ್ ತಾಯಿ ಮಾತ್ರ ಇದ್ಯಾವುದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದುಬಿಟ್ಟರು. ಎಷ್ಟೋ ವರ್ಷಗಳಿಂದ ನಿರ್ದಾಕ್ಷಿಣ್ಯವಾಗಿ ತನಗೆ ಮುಖವನ್ನೇ ತೋರದ ಮಗನನ್ನು ಮತ್ತೆ ನೋಡುವುದೇ ಬೇಡ ಎಂಬಷ್ಟು ಆ ಮಾತೃ ಹೃದಯ ಕಲ್ಲಾಗಿಹೋಗಿತ್ತೋ ಅಥವಾ ತಾನು ಆವರೆಗೂ ಮನಸ್ಸಿನಲ್ಲಿ ಹುದುಗಿಸಿಕೊಂಡು ಬಂದಿದ್ದ, ತನ್ನ ಮಡಿಲಲ್ಲಿ ಆಡಿ ಬೆಳೆದ ಕಂದನ ಸುಂದರ ಚಿತ್ರಣಕ್ಕೆ ಮುಂದೆ ತಾನು ನೋಡಲಿದ್ದ ದೃಶ್ಯ ಮಸಿ ಬಳಿದುಬಿಡಬಹುದೆಂಬ ಭೀತಿಯೋ ಅಂತೂ ಆ ತಾಯಿ ಮಾತ್ರ ಮಗನ ಶವದಿಂದ ದೂರವೇ ಉಳಿದುಬಿಟ್ಟರು.
ಸಾಕೇತ್ ಜೊತೆಗೇ ಬಲಿಯಾದ ಅವರ ಸಹಚರನ ಶವ, ವಾರಸುದಾರರೇ ಇಲ್ಲದೆ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಅನಾಥವಾಗಿ ಬಿದ್ದಿತ್ತು. ಕಡೆಗೆ ಅದು ರಾಯಚೂರು ಜಿಲ್ಲೆಯ ಸಿಂಧನೂರಿನ ಶಿವಲಿಂಗುವಿನದು ಎಂಬುದು ಪತ್ತೆಯಾಗುವ ಹೊತ್ತಿಗೆ ಮೂರು ದಿನ ಕಳೆದುಹೋಗಿತ್ತು.
ಒಮ್ಮೆ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಸಮಾರಂಭವೊಂದರಲ್ಲಿ ನಕ್ಸಲ್ ಬೆಂಬಲಿಗರಿಗೆ ಒಂದು ಸವಾಲು ಹಾಕಿದ್ದರು. `ಸಮಾಜ ಉದ್ಧಾರ ಮಾಡಲು, ವ್ಯವಸ್ಥೆಯ ವಿರುದ್ಧದ ನಿಮ್ಮ ಆಕ್ರೋಶ ಹೊರಹಾಕಲು ಕಂಡವರ ಮನೆಯ ಮಕ್ಕಳ ತಲೆಕೆಡಿಸಿ ಕೈಗೆ ಬಂದೂಕು ಕೊಡುವ ನೀವು, ನಿಮ್ಮ ಮಕ್ಕಳು ಮಾತ್ರ ಡಾಕ್ಟರು, ಎಂಜಿನಿಯರ್ ಆಗಬೇಕೆಂದು ಆಸೆಪಡುತ್ತೀರಿ; ಹಾಗಿದ್ದರೆ ನಿಮ್ಮ ಮಕ್ಕಳ ಕೈಗೇ ಬಂದೂಕು ಕೊಟ್ಟು ಕಾಡಿಗೆ ಕಳಿಸಿ ನೋಡೋಣ' ಎಂದಿದ್ದರು.
ಆಗ, ತಾವು ಮಾತ್ರ ಮುಖ್ಯವಾಹಿನಿಯ ಸುರಕ್ಷಿತ ವಲಯದಲ್ಲಿ ಇದ್ದುಕೊಂಡು ಬೇರೆಯವರ ಮಕ್ಕಳ ತಲೆಯಲ್ಲಿ ಕ್ರಾಂತಿಯ ಬೀಜ ಬಿತ್ತುತ್ತಿದ್ದ ಯಾರೊಬ್ಬರೂ, ಮರ್ಮಕ್ಕೆ ಚುಚ್ಚುವಂತಿದ್ದ ಈ ನೇರ ಸವಾಲಿಗೆ ಉತ್ತರಿಸುವ ಧೈರ್ಯ ತೋರಿರಲಿಲ್ಲ.
ಶೃಂಗೇರಿ ಬಳಿಯ ಬರ್ಕಣ ಎಂಬ ಕಾಡಿನಲ್ಲಿ ಒಮ್ಮೆ ನಕ್ಸಲ್ ಯುವಕನೊಬ್ಬ ಪೊಲೀಸರ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಪರಾರಿಯಾಗಿದ್ದ. ಆ ನಿರ್ಜನ ಪ್ರದೇಶದಲ್ಲಿ ಆರೈಕೆ ಮಾಡುವವರಿಲ್ಲದ ಅವನ ಅರಣ್ಯ ರೋದನ ಹೇಗಿದ್ದಿರಬಹುದು ಎಂದು ಊಹೆ ಮಾಡಿಕೊಂಡಿದ್ದವರಿಗೆ ತೇಜಸ್ವಿಯವರ ಮಾತಿನ ಹಿನ್ನೆಲೆ ಸ್ಪಷ್ಟವಾಗೇ ಅರ್ಥವಾಗಿತ್ತು.
ಬಡತನದ ಬೇಗೆಯಿಂದ, ವಯೋಸಹಜ ಹುಂಬತನದಿಂದ ಅಥವಾ ಇರುವುದನ್ನೆಲ್ಲಾ ಬುಡಮೇಲು ಮಾಡಿಬಿಡುವ ಬಹು ದೊಡ್ಡ ಕ್ರಾಂತಿಕಾರಿಗಳು ತಾವು ಎಂಬ ಭ್ರಮೆಯಿಂದ ವ್ಯವಸ್ಥೆಯೆಂಬ ಮಹಾಪ್ರವಾಹಕ್ಕೆ ಎದುರಾಗಿ ನಿಂತುಬಿಡುವ ಎದೆಗಾರಿಕೆ ತೋರುವ ಈ ಮಕ್ಕಳಿಗೆ, ವಾಸ್ತವದಲ್ಲಿ ನಿಜವಾದ ಸಮಸ್ಯೆಯ ಅರಿವಿರುವುದಿಲ್ಲ.
ನಾವು ಹೋರಾಡುತ್ತಿರುವುದಾದರೂ ಯಾವ ಉದ್ದೇಶಕ್ಕೆ, ನಮ್ಮ ರಕ್ತಸಿಕ್ತ ಹೋರಾಟ ಪರಿಹಾರದ ದಾರಿ ತೆರೆಸುವಷ್ಟು ಪರಿಣಾಮಕಾರಿಯಾದದ್ದೇ ಎಂದು ಯೋಚಿಸುವ ವ್ಯವಧಾನವೂ ಇರುವುದಿಲ್ಲ. ಅಂತಹದ್ದೊಂದು ಚಿಂತನೆ ಅವರ ತಲೆಯಲ್ಲಿ ಮೊಳಕೆಯೊಡೆಯುವ ಕಾಲಕ್ಕೆ, ಹಿಂದಿರುಗಿ ಬರಲಾರದಷ್ಟು ದೂರ ಅವರು ಸಾಗಿಹೋಗಿರುತ್ತಾರೆ.
ಕಡೆಗೊಂದು ದಿನ ಕಸಾಬ್ ವಿಷಯದಲ್ಲಿ ಆದಂತೆ, `ವ್ಯವಸ್ಥೆಯ ವಿರುದ್ಧದ ಹೋರಾಟ' ಎಂಬ ನೆಳಲು-ಬೆಳಕಿನ ಆಟದಲ್ಲಿ ದಾಳಗಳಷ್ಟೇ ಉರುಳುತ್ತವೆ. ಸೂತ್ರಧಾರರು ಮಾತ್ರ ಕೂದಲನ್ನೂ ಕೊಂಕಿಸಿಕೊಳ್ಳದೆ ತೆರೆಮರೆಯಲ್ಲೇ ಉಳಿದುಬಿಡುತ್ತಾರೆ. ಹೊಸ ದಾಳಗಳಿಗಾಗಿ ಹುಡುಕಾಡುತ್ತಾರೆ. ನಿಂತಲ್ಲಿಂದ ಮತ್ತೆ ಆಟ ಶುರುವಾಗುತ್ತದೆ.
ಕ್ರಿಸ್ತ ಪೂರ್ವ 1550 ರಲ್ಲಿ ದೊರೆತ ಮಹಿಳೆಯ ತಲೆಬುರುಡೆ ಆಗಿನಿಂದಲೂ ಮಹಿಳೆಗೆ ಆಭರಣದ ಬಗ್ಗೆ ಇದ್ದ ಆಸಕ್ತಿಯ ಬಗ್ಗೆ ಪ್ರತಿಬಿಂಬಿಸುತ್ತದೆ.










Bronze Age bling: The female skeleton, which dates back to between 1550 and 1250 BC, was discovered in Halle, Germany

Proof that women have ALWAYS loved jewellery: Skull from 1550BC goes on display with elaborate bronze headband

  • Female skeleton was discovered in Rochlitz, south of Halle, east Germany, while construction work was underway on a new rail track
  • The skeleton - thought to date back to between 1550 and 1250 BC - was found to be wearing an elaborate headband made of tiny bronze spirals

She may have walked the earth thousands of years ago, but this woman was clearly as fond of a nice piece of jewellery as the average 21st Century girl.
The female skeleton, which is believed to date back to between 1550 and 1250BC, was discovered in Rochlitz, south of Halle in eastern Germany, while construction was underway to build a new rail track.
The Middle Bronze Age woman had been buried wearing an elaborate headband made up of tiny

Staff at the State Museum of Prehistory in Halle, where the skeleton is now on display as part of its permanent exhibition, said similar spirals uncovered in the past had been found separate and loose.







Thursday, December 6, 2012

 ಕುರ್ ಆನ್ ಓದದ ಮಗನನ್ನ ಮರಣಗೇಯ್ದ ಮಹಾತಾಯಿ


ಲಂಡನ್, ಡಿ.7‌: ಆಕೆ ಹೇಳಿಕೇಳಿ ಗಣಿತದಲ್ಲಿ ಸ್ನಾತಕೋತ್ತರ ಪದವೀಧರೆ. ಬದುಕಿನಲ್ಲಿ ಎಲ್ಲವೂ ಶಿಸ್ತುಬದ್ಧವಾಗಿ, ಕರಾರುವಕ್ಕಾಗಿ ಲೆಕ್ಕಾಚಾರದಂತೆ ನಡೆಯಬೇಕು ಎಂದು ಬಯಸಿದ್ದಳು. ಆದರೆ ಆಕೆಯ ಮುದ್ದುಮಗನಿಗೆ ಇದೆಲ್ಲ ಹೇಗೆ ಗೊತ್ತಾಬೇಕು.
ಮೊದ್ದುಮಗ ಅಮ್ಮ ಹೇಳಿದಂತೆ ಮುಸ್ಲಿಮರ ಪವಿತ್ರವಾದ ಖುರಾನ್‌ ಅನ್ನು ಪಠಿಸಿ, ನೆನಪಿಟ್ಟುಕೊಳ್ಳುವಲ್ಲಿ ತಡಬಡಾಯಿಸಿದ್ದಾನೆ. ಅಮ್ಮನಿಗೆ ಅಷ್ಟು ಸಾಕಾಗಿತ್ತು. ಮಗ ಬದುಕಿನ ಲೆಕ್ಕಾಚಾರ ತಪ್ಪುತ್ತಿದ್ದಾನೆ ಎಂದು ಭಾವಿಸಿದವಳೇ ಅವನನ್ನು ನಾಯಿಗೆ ಬಡಿದಂತೆ ಬಡಿದು ಸಾಯಿಸಿದಳು.
ಆಕೆಯ ದಾಹ ಅಲ್ಲಿಗೇ ಸಾಯಲಿಲ್ಲ. ಮುಂದೆ ಮಗನ ಶವ ತನ್ನನ್ನು ತಪ್ಪಿತಸ್ಥವಾಗಿಸುತ್ತದೆ ಎಂದು ಆ ಶವವನ್ನು ಸುಟ್ಟುಬಿಟ್ಟಿದ್ದಾಳೆ. ಬ್ರಿಟೀಷ್‌ ಕೋರ್ಟ್ ಆ ಭಾರತೀಯ ಮೂಲದ ಮಹಾತಾಯಿಯನ್ನುಈಗ ಅಪರಾಧಿ ಎಂದು ಘೋಷಿಸಿದೆ.
ಎರಡು ವರ್ಷಗಳ ಹಿಂದೆ ಜುಲೈಯಲ್ಲಿ ಆಕೆ ಪೊಂಟಕನ್ನದಲ್ಲಿರುವ ( Pontcanna, Cardiff) ಮನೆಯಲ್ಲಿ ಮಗ ಯಾಸೀನ್‌ ಇಗೆಯನ್ನು ನಾಯಯಿಯಂತೆ ಥಳಿಸಿ ಕೊಂದು ಬಳಿಕ ಶವವನ್ನು ಸುಟ್ಟು ಹಾಕಿದ್ದಾಳೆ. ಸಾರಾ ಇಗೆಯ (33) ಈ ಅಪರಾಧ ಕಾರ್ಡಿಫ್ ಕ್ರೌನ್‌ ಕೋರ್ಟಿನಲ್ಲಿ ಬುಧವಾರ ಸಾಬೀತಾಗಿದೆ. ನ್ಯಾಯಾಲಯ Sara Egeಗೆ ಶಿಕ್ಷೆಯ ಸ್ವರೂಪವನ್ನು ಇನ್ನೂ ಪ್ರಕಟಿಸಿಲ್ಲ.

ಮೊದಲು ಯಾಸೀನ್‌ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಸತ್ತಿದ್ದಾನೆಂದು ಭಾವಿಸಲಾಗಿತ್ತು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅವನು ಸತ್ತು ಕೆಲವು ತಾಸು ಕಳೆದ ಬಳಿಕ ದೇಹ ಸುಟ್ಟಿರುವ ಸಂಗತಿ ತಿಳಿಯಿತು.
ಮಗನ ಸಾವಿಗೆ ಗಂಡನೇ ಹೊಣೆ. ಕೊಲೆಯ ಆರೋಪವನ್ನು ಹೊತ್ತುಕೊಳ್ಳದಿದ್ದರೆ ಗಂಡ ನನ್ನನ್ನು ಕೊಂದು ನನ್ನ ಪರಿವಾರದವರಿಗೂ ಹಿಂಸೆ ಕೊಡುವ ಬೆದರಿಕೆಯೊಡ್ಡಿದ್ದ ಎಂದು ಹೇಳಿ ಸಾರಾ ತಾನು ನಿರ್ದೋಷಿ ಎಂದು ವಾದಿಸಿದರೂ ನ್ಯಾಯಾಲಯ ಅವಳ ವಾದವನ್ನು ಒಪ್ಪಿಕೊಳ್ಳಲಿಲ್ಲ.
ಟ್ಯಾಕ್ಸಿ ಚಾಲಕನಾಗಿರುವ 38 ವರ್ಷದ ಯೂಸುಫ್ (Yousuf Ege) ಮಗನನ್ನು ಹಾಫಿಜ್‌ (ಖುರಾನ್‌ ಪಠನ) ಮಾಡುವ ಸಲುವಾಗಿ ಸಮೀಪದ ಮಸೀದಿಗೆ ಸೇರಿಸಿದ್ದ. ಆದರೆ ಯಾಸೀನ್‌ ಖುರಾನ್‌ ಬಾಯಿಪಾಠ ಮಾಡಲಿಲ್ಲ. ಈ ಸಿಟ್ಟಿನಲ್ಲಿ ಸಾರಾ ಮಗನನ್ನು ಥಳಿಸಿ, ಕೊಂದು, ಸುಟ್ಟುಹಾಕಿದ್ದಾಳೆ.

 ಆಲದಮರದಡಿ ಧ್ಯಾನಿಸುತ್ತಾ ಕುಳಿತವನಿಗೆ ಶಾರದೆಯ ಹಾಡು ಒಲಿಯಿತು

ಕಣಕಣದೆ ಶಾರದೆ…
ಚಿತ್ರ: ಆಪ್ತಮಿತ್ರ. ಗಾಯನ: ಮಧು ಬಾಲಕೃಷ್ಣ
ಗೀತೆರಚನೆ: ಕವಿರಾಜ್. ಸಂಗೀತ: ಗುರುಕಿರಣ್
ಕಣಕಣದೆ ಶಾರದೆ, ಕಲೆತಿಹಳು ಕಾಣದೆ
ವನವನದಲ್ಲೂ ಕುಹುಕುಹು ಗಾನ
ಝರಿಝರಿಯಲ್ಲೂ ಜುಳುಜುಳು ಧ್ಯಾನ
ವಿಧವಿಧದಾ ನಾದ ಅವಳು ನುಡಿಸುತಿಹಳು ||ಪ||
ಜನನಕು ಹಾಡು ಮರಣಕು ಹಾಡು ಯಾರೀ ಛಲಮಗಳು
ಪ್ರತಿ ಎದೆಯಾಳದಲು ಲಯ ತಾಳ ಗೀತೆ ಬದುಕಿನಲು
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ಉಲಿದು ನಲಿದು ಹರಿದು ಬರುವುದು ಶ್ರುತಿಲಯವು ||೧||
ಕುಲ ನೆಲದಾಚೆ ಅರಿಯುವ ಭಾಷೆ ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರೆಲ್ಲ ಸಪ್ತಸ್ವರಗಳಿಗೆ
ನಿಪಮಪನಿ ಸನಿಪನಿಸ ಗಸನಿಸಗ
ಮಪಮಪಗ ನಿಮಪಮ ಸನಿಪನಿ ಗಸನಿಸ ||೨||
‘ಆಪ್ತಮಿತ್ರ’ ಚಿತ್ರದ ಈ ಸನ್ನಿವೇಶ ನೆನಪಿಸಿಕೊಳ್ಳಿ. ಆ ಚಿತ್ರದಲ್ಲಿ ಪ್ರೇಮಾ ಸೆಕೆಂಡ್ ಹೀರೊಯಿನ್. ಆಕೆಯ ತಾತನ ಪಾತ್ರಧಾರಿ ಶಿವರಾಂ. ಈ ತಾತ-ಮೊಮ್ಮಗಳು, ನಾಯಕ ರಮೇಶ್ ಮನೆಯ ಔಟ್ಹೌಸ್ನಲ್ಲಿ ಇರುತ್ತಾರೆ. ಅದೊಂದು ದಿನ ಬೆಳ್ಳಂಬೆಳಗ್ಗೆಯೇ ಹಾರ್ಮೋನಿಯಂ ನುಡಿಸುತ್ತಾ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿರುತ್ತಾರೆ ಪ್ರೇಮಾ. ತುಸು ಕರ್ಕಶ ಅನ್ನುವಂಥ ಸಂಗೀತ ಹಾಗೂ ಹಾಡು ಕೇಳಿದ ಕಥಾನಾಯಕ ರಮೇಶ್ರ ಗೆಳೆಯ ವಿಷ್ಣುವರ್ಧನ್- ‘ಅಯ್ಯೋ, ಇದ್ಯಾರಪ್ಪಾ ಬೆಳಗ್ಗೆ ಬೆಳಗ್ಗೇನೇ ರಾಗ ಶುರುಮಾಡಿ ನನ್ನ ನಿದ್ರೇನ ಹಾಳು ಮಾಡಿದರಲ್ಲ’ ಎಂದುಕೊಂಡೇ ಹಾಸಿಗೆಯಲ್ಲಿ ಹೊರಳುತ್ತಿರುತ್ತಾರೆ. ಆ ನಂತರದಲ್ಲೂ ಆ ಹಾಡಾಗಲಿ, ಸಂಗೀತವಾಗಲಿ ನಿಲ್ಲುವುದಿಲ್ಲ. ಒಂದೆಡೆ ಕರ್ಕಶ ಸಂಗೀತದ ಹಿಂಸೆ, ಇನ್ನೊಂದೆಡೆ ಬೆಳಗಿನ ನಿದ್ರೆ ಹಾಳಾಯಿತು ಎಂಬ ಸಿಟ್ಟಿನಿಂದ ಎದ್ದು ಬಂದ ವಿಷ್ಣುವರ್ಧನ್ಗೆ, ಆ ಸಂಗೀತ ಮತ್ತು ಹಾಡು ಔಟ್ಹೌಸ್ನಿಂದ ಕೇಳಿಬರುತ್ತಿದೆ ಎಂದು ಅರ್ಥವಾಗುತ್ತದೆ.
ಸಿಡಿಮಿಡಿಯಿಂದಲೇ ಶಿವರಾಂ ಅವರನ್ನು ಹೊರಗೆ ಕರೆಯುವ ವಿಷ್ಣುವರ್ಧನ್ ಆಗ್ರಹದ ಧ್ವನಿಯಲ್ಲಿ ಹೀಗೆ ಹೇಳುತ್ತಾರೆ: ‘ನೋಡಿ, ಈ ಮನೆಯಲ್ಲೇ ವಾಸಕ್ಕೆ ಇರಬೇಕು ಅನ್ನುವುದಾದರೆ, ಇವತ್ತಿಂದಲೇ ಈ ಸಂಗೀತ ಕಾರ್ಯಕ್ರಮವನ್ನು ನೀವು ಬಂದ್ ಮಾಡಬೇಕು. ಇಲ್ಲ ಅಂದರೆ…’
ಈ ಮಾತಿನಿಂದ ವ್ಯಗ್ರಳಾದ ಪ್ರೇಮಾ- ‘ಬೇಕಾದರೆ ನಾವು ಈ ಜಾಗ ಬಿಟ್ಟು ಹೋಗ್ತೇವೆ. ಆದರೆ ಸಂಗೀತವನ್ನು ಬಿಡುವುದಿಲ್ಲ. ಅದರ ಮಹತ್ವ ನಿಮಗೇನು ಗೊತ್ತು? ಸಂಗೀತದ ಗಂಧ-ಗಾಳಿಯ ಪರಿಚಯವೂ ಇಲ್ಲದವರ ಬಳಿ ಮಾತಾಡಿ ಏನು ಪ್ರಯೋಜನ?’ ಎಂದೆಲ್ಲ ಕಟುವಾಗಿ ಮಾತನಾಡಿ ಹೋಗಿಬಿಡುತ್ತಾಳೆ.
ವಿಷ್ಣುವರ್ಧನ್ ಏನೊಂದೂ ಮಾತನಾಡದೆ ಮನೆಗೆ ಹಿಂದಿರುಗುತ್ತಾರೆ. ಒಂದೆರಡು ನಿಮಿಷದ ನಂತರ ಹಾಡೊಂದು ಅಲೆಅಲೆಯಾಗಿ ಕೇಳಿಬರುತ್ತದೆ- ‘ಕಣ ಕಣದೆ ಶಾರದೆ, ಕಲೆತಿಹಳು ಕಾಣದೇ…’ ಹಾಡು ಮತ್ತು ಸಂಗೀತದ ಧ್ವನಿ ಕೇಳಿದ ನಾಯಕಿ, ಇದೆಲ್ಲಿಂದ ಬರುತ್ತಿದೆ ಈ ಮಧುರ ರಾಗಾಲಾಪ ಎಂದು ತಿಳಿಯಲು ಓಡುತ್ತಾ ಮೆಟ್ಟಿಲೇರಿ ಹಾಡು ಕೇಳಿಸುತ್ತಿದ್ದ ಕೋಣೆಗೆ ಬಂದವಳೇ ಬೆಕ್ಕಸಬೆರಗಾಗಿ ನಿಂತುಬಿಡುತ್ತಾಳೆ. ಏಕೆಂದರೆ, ಕಥಾನಾಯಕ ವಿಷ್ಣುವರ್ಧನ್, ಹಾರ‍್ಮೋನಿಯಂ ಬಾರಿಸಿಕೊಂಡು ತನ್ಮಯನಾಗಿ ಹಾಡುತ್ತಿರುತ್ತಾನೆ. ಕೆಲವೇ ನಿಮಿಷಗಳ ಹಿಂದಷ್ಟೇ- ‘ನಿಮಗೆ ಸಂಗೀತದ ಮಹಿಮೆ ಗೊತ್ತಿಲ್ಲ, ಸಂಗೀತದ ಗಂಧ-ಗಾಳಿ ಕೂಡ ಇಲ್ಲ ಎಂದು ಟೀಕಿಸಿದ್ದೆನಲ್ಲ’ ಎಂದು ನೆನಪು ಮಾಡಿಕೊಂಡು ಪ್ರೇಮಾ ಕಂಗಾಲಾದ ಕ್ಷಣದಲ್ಲಿಯೇ ನಾಯಕ ತಬಲಾ ಕೈಗೆತ್ತಿಕೊಳ್ಳುತ್ತಾನೆ. ನಂತರದಲ್ಲಿ ಸಂಗೀತದ ಒಂದೊಂದೇ ಸಾಧನಕ್ಕೆ ಹೊರಳಿಕೊಳ್ಳುತ್ತಾನೆ. ಹಾಡು ಮುಗಿಯುತ್ತಿದ್ದಂತೆಯೇ- ‘ನಿಮ್ಮ ಸಂಗೀತ eನದ ಬಗ್ಗೆ ತಿಳಿಯದೇ ನಾನು ದುಡುಕಿ ಮಾತಾಡಿಬಿಟ್ಟೆ. ದಯವಿಟ್ಟು ಕ್ಷಮಿಸಿ’ ಎನ್ನುತ್ತಾಳೆ ನಾಯಕಿ…
ಅಂದಹಾಗೆ, ಈ ಹಾಡು ಬರೆದವರು ಕವಿರಾಜ್. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಯಡೂರು ಎಂಬ ಗ್ರಾಮದವರಾದ ಕವಿರಾಜ್, ಓದಿದ್ದು ಬಿ.ಎಸ್ಸಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಮುಗಿಸಿದ ಕವಿರಾಜ್, ಕಾಲೇಜು ದಿನಗಳಲ್ಲಿ ಒಂದಿಷ್ಟು ಪ್ರೇಮಗೀತೆಗಳನ್ನು ಬರೆದರು ನಿಜ. ಆದರೆ ಅವುಗಳನ್ನು ಹುಡುಗಿಯರಿಗೆ ಕೊಡುವುದಿರಲಿ, ತೋರಿಸುವ ಸಾಹಸವನ್ನೂ ಮಾಡಲಿಲ್ಲ. ಕಡೆಗೊಂದು ದಿನ, ಧೈರ್ಯ ಮಾಡಿ ಆಪ್ತಮಿತ್ರನೊಬ್ಬನಿಗೆ ತೋರಿಸಿದರು. ಆತ- ‘ವಾಹ್ , ತುಂಬಾ ಚೆನ್ನಾಗಿ ಬರೆದಿದ್ದೀ ಕಣೋ’ ಎಂದ. ಒಂದೆರಡು ದಿನಗಳ ನಂತರ ಕವನವೊಂದನ್ನು ಕಾಲೇಜಿನ ನೋಟಿಸ್ ಬೋರ್ಡ್ಗೇ ಹಾಕಿಬಿಟ್ಟ. ಪರಿಣಾಮ ಸಹ್ಯಾದ್ರಿ ಕಾಲೇಜಿನ ಅಂಗಳದಲ್ಲಿ ವರ್ಲ್ಡ್ ಫೇಮಸ್ ಆಗಿ ಹೋದರು ಕವಿರಾಜ್. ನಂತರದ ದಿನಗಳಲ್ಲಿ ಅವರ ಸಹಪಾಠಿಗಳು ಮಾತ್ರವಲ್ಲ, ಅಧ್ಯಾಪಕರು ಕೂಡ- ‘ನೀವು ಚೆನ್ನಾಗಿ ಕವಿತೆ ಬರೀತೀರ. ಮುಂದುವರಿಸಿ’ ಅಂದರಂತೆ.
ಪದವಿಯ ನಂತರ ಸ್ವಲ್ಪ ದಿನದ ಮಟ್ಟಿಗೆ ಪದ್ಯ ಬರೆಯುವುದನ್ನೇ ಮರೆತ ಕವಿರಾಜ್, ಉದರನಿಮಿತ್ತಂ- ಬೆಂಗಳೂರಿಗೆ ಬಂದರು. ಮೆಡಿಕಲ್ ರೆಪ್ರಸೆಂಟೇಟಿವ್ ಆದರು. ಔಷಧ ಮಾರಾಟ ಹಾಗೂ ಮಾತ್ರೆ-ಟಾನಿಕ್ನ ಮಹಾತ್ಮೆ ಸಾರುತ್ತಾ ಬೆಂಗಳೂರನ್ನು ಗಿರಗಿರಗಿರ ಸುತ್ತಿದರು. ಆ ನೌಕರಿಯಲ್ಲಿ ಕೈತುಂಬ ಸಂಬಳವಿತ್ತು ನಿಜ. ಆದರೆ ಆತ್ಮಸಂತೋಷ ಅಂತೀವಲ್ಲ? ಅದು ಇರಲಿಲ್ಲ. ಅದೊಂದು ದಿನ, ಈ ಮೆಡಿಕಲ್ ರೆಪ್ ಕೆಲಸ ಸಾಕು ಎಂದು ನಿರ್ಧರಿಸಿದ ಕವಿರಾಜ್, ಸಿನಿಮಾಕ್ಕೆ ಹಾಡು ಬರೆದೇ ಯಾಕೆ ಬದುಕಬಾರದು ಎಂದು ಯೋಚಿಸಿದರು. ನಂತರ ಅದು ಹೇಗೋ ಸಂಗೀತ ನಿರ್ದೇಶಕ ಗುರುಕಿರಣ್ರ ಮನೆ ವಿಳಾಸ ಪತ್ತೆಹಚ್ಚಿ, ಒನ್ ಫೈನ್ ಡೇ ಅವರ ಮನೆಯ ಬಾಗಿಲು ಬಡಿದೇ ಬಿಟ್ಟರು.
ಆ ಸಂದರ್ಭವನ್ನು ಕವಿರಾಜ್ ವಿವರಿಸುವುದು ಹೀಗೆ: ‘ನನಗೆ ಅದಕ್ಕೂ ಮುಂಚೆ, ಗುರುಕಿರಣ್ರ ಪರಿಚಯವಿರಲಿಲ್ಲ. ಯಾರ ಶಿಫಾರಸು ಪತ್ರವೂ ನನ್ನಲ್ಲಿರಲಿಲ್ಲ. ಆದರೂ ಒಂದು ಭಂಡ ಧೈರ್ಯದೊಂದಿಗೆ, ವಿಶ್ವಾಸದೊಂದಿಗೆ ಹೋದೆ. ನನ್ನ ಪರಿಚಯ, ಹಿನ್ನೆಲೆ, ಹೇಳಿಕೊಂಡೆ. ಗೀತರಚನೆಕಾರ ಆಗಬೇಕು ಅಂತಿದೀನಿ ಸಾರ್. ದಯವಿಟ್ಟು ಅವಕಾಶ ಕೊಡಿ ಅಂದೆ. ನನ್ನ ಹಳೆಯ ಪದ್ಯಗಳನ್ನು ತೋರಿಸಿದೆ. ಅದನ್ನೆಲ್ಲ ನೊಡಿದ ಗುರುಕಿರಣ್- ‘ಸರಿ, ಈಗ ಒಂದು ಟ್ಯೂನ್ ಕೇಳಿಸ್ತೀನಿ. ಅದನ್ನು ಕೇಳಿಸ್ಕೊಂಡು ಹಾಡು ಬರೆದುಕೊಂಡು ಬನ್ನಿ’ ಎಂದರು.
ಆ ವೇಳೆಗಾಗಲೇ ತುಂಬ ಜನಪ್ರಿಯರಾಗಿದ್ದ, ಬ್ಯುಸಿಯಾಗಿದ್ದ ಗುರುಕಿರಣ್ರಿಂದ ನಾನು ಅಂಥ ಅಪರೂಪದ ಕಾಣಿಕೆಯನ್ನು ನಿರೀಕ್ಷಿಸಿರಲಿಲ್ಲ. ಒಂದು ವೇಳೆ ಅವರೇನಾದರೂ, ‘ನಾನಿವತ್ತು ಬ್ಯುಸಿ ಇದೀನಿ. ನಾಳೆ ಬನ್ನಿ’ ಅಂದಿದ್ರೆ, ಮತ್ತೆ ಆ ಕಡೆಗೆ ಹೋಗ್ತಾ ಇದ್ದೆನೋ ಇಲ್ಲವೋ ಗೊತ್ತಿಲ್ಲ. ಆದರೆ ಹೊಸಬನಾದ ನನ್ನನ್ನು ‘ಹಾಡು ಬರ‍್ಕೊಂಡು ಬಾ’ ಅಂದರಲ್ಲ? ಆ ಮಾತು ಕೇಳಿ ನಾನು ಗಾಳಿಯಲ್ಲೇ ತೇಲಾಡಿದೆ. ಆ ಕ್ಷಣದ ನನ್ನ ಸಂಭ್ರಮವನ್ನೆಲ್ಲ ಜತೆಗಿಟ್ಟುಕೊಂಡು- ‘ನನ್ನಲಿ ನಾನಿಲ್ಲ ಮನದಲಿ’ ಹಾಡು ಬರೆದೆ. ೨೦೦೨ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ ‘ಕರಿಯಾ’ ಚಿತ್ರಕ್ಕೆ ಈ ಹಾಡು ಬಳಕೆಯಾಯಿತು. ಹಾಡು ಮತ್ತು ಸಿನಿಮಾ ಸೂಪರ್ಹಿಟ್ ಆಯಿತು.’
ಹೀಗೆ, ಮೊದಲ ಹಾಡಿಂದಲೇ ಜಾಕ್ಪಾಟ್ ಹೊಡೆದ ಕವಿರಾಜ್- ‘ಆಪ್ತಮಿತ್ರ’ ಚಿತ್ರಕ್ಕೆ ಹಾಡು ಬರೆದದ್ದು ಹೇಗೆ? ‘ಕಣಕಣದೆ ಶಾರದೆ’ ಹಾಡು ಅವರಿಗೆ ಒಲಿದದ್ದು ಎಲ್ಲಿ ಮತ್ತು ಹೇಗೆ? ಸಂಗೀತ ಅಭ್ಯಾಸ ಮಾಡುವ ಸಂದರ್ಭದಲ್ಲೇನಾದರೂ ಅವರು ಈ ಹಾಡು ಬರೆದರೋ ಹೇಗೆ? ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಖುದ್ದು ಕವಿರಾಜ್ ಉತ್ತರಿಸಿದ್ದು ಹೀಗೆ:
‘ಕರಿಯಾ’ ಚಿತ್ರದಲ್ಲಿ ನನ್ನ ಕೈಹಿಡಿದ ಗುರುಕಿರಣ್, ನಂತರದಲ್ಲಿ ತಮ್ಮ ಸಂಗೀತ ನಿರ್ದೇಶನದ ಹಲವು ಚಿತ್ರಗಳಲ್ಲಿ ಅವಕಾಶ ಕೊಟ್ಟರು. ೨೦೦೩ರಲ್ಲಿ ದ್ವಾರಕೀಶ್ ನಿರ್ಮಾಣದ ‘ಆಪ್ತಮಿತ್ರ’ ಶುರುವಾದಾಗ- ನನ್ನನ್ನು ಕರೆದು- ‘ಒಂದು ಹಾಡು ಬರಿ’ ಅಂದರು. ಚಿಕ್ಕಂದಿನಿಂದಲೂ ವಿಷ್ಣುವರ್ಧನ್ರ ಕಟ್ಟಾ ಅಭಿಮಾನಿ ನಾನು. ಅವರಿಗೇ ಒಂದು ಹಾಡು ಬರೆವ ಅವಕಾಶ ಸಿಕ್ಕಿತ್ತು. ನಾನಂತೂ ಥ್ರಿಲ್ಲಾಗಿ ಹೋದೆ. ಡ್ಯುಯೆಟ್ ಸಾಂಗ್ ಇರಬೇಕು ಅಂದುಕೊಂಡು ‘ಆಯ್ತು ಸಾರ್’ ಬರೀತೀನಿ ಅಂದೆ. ನಂತರ ಒಂದು ಟ್ಯೂನ್ ಕೇಳಿಸಿದ ಗುರುಕಿರಣ್- ‘ಇದು ಶಾಸ್ತ್ರೀಯ ಸಂಗೀತದ ಹಾಡಾಗಬೇಕು. ಹುಶಾರಾಗಿ ಯೋಚಿಸಿ, ಚೆನ್ನಾಗಿ ಬರಿ’ ಅಂದರು.
ಶಾಸ್ತ್ರೀಯ ಸಂಗೀತದ ಬಗ್ಗೆ ನನಗೆ ಅಂಥ ಒಳ್ಳೆಯ eನವಿರಲಿಲ್ಲ. ಹಾಗಾಗಿ, ಗುರುಕಿರಣ್ರ ಮಾತು ಕೇಳಿ ಥರಗುಟ್ಟಿಹೋದೆ. ಯಾಕೋ ಇದು ನನ್ನಿಂದ ಆಗದ ಕೆಲಸ ಅನಿಸಿತು. ಅದನ್ನೇ ಗುರುಕಿರಣ್ಗೆ ಹೇಳಿದೆ. ಅವರು- ‘ಹೆದರಬೇಡ. ನೀನು ಬರೀತೀಯ. ಸ್ವಲ್ಪ ಟೈಮ್ ತಗೋ. ಕೂಲ್ ಆಗಿರು’ ಎಂದರು. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಕೂಡ ಅದೇ ಮಾತು ಹೇಳಿ ‘ಬೆಸ್ಟ್ ಆಫ್ ಲಕ್’ ಎಂದರು.
ಬೆಂಗಳೂರಿನ, ಬಸವೇಶ್ವರ ನಗರದಲ್ಲಿರುವ ಆಲದ ಮರದ ಪಾರ್ಕ್ಗೆ ಆವಾಗಾವಾಗ ಹೋಗುವುದು ನನ್ನ ಅಭ್ಯಾಸ. ಅದೊಂದು ಸಂಜೆ ಹೋಗಿ ಪಾರ್ಕ್ನಲ್ಲಿ ಕೂತಿದ್ದೆ. ಬೃಹತ್ತಾದ ಆ ಆಲದಮರದ ತುಂಬಾ ನೂರಾರು ಹಕ್ಕಿಗಳಿದ್ದವು. ಎಲ್ಲವೂ ಅಲ್ಲಿಯೇ ಗೂಡು ಕಟ್ಟಿಕೊಂಡಿದ್ದವು. ಕೆಲವು ಆಗಲೇ ಗೂಡು ಸೇರಿದ್ದವು. ಮತ್ತೆ ಕೆಲವು ಗೂಡಿಗೆ ಮರಳುತ್ತಿದ್ದವು. ಇಡೀ ಪಾರ್ಕಿನ ತುಂಬಾ ಹಕ್ಕಿಗಳದ್ದೇ ಕಲರವ. ಸುಮ್ಮನೇ ಒಮ್ಮೆ ಕತ್ತೆತ್ತಿ ನೋಡಿದರೆ, ಎಲೆ ಎಲೆಯ ಮೇಲೂ ಹಕ್ಕಿಗಳೇ ಕಂಡವು. ‘ಈ ಹಕ್ಕಿಗಳಿಗೂ ಒಂದು ಭಾಷೆ ಕಲಿಸಿದ್ದಾಳಲ್ಲ? ಅವುಗಳಿಗೂ ‘ಬುದ್ಧಿ’ ನೀಡಿದ್ದಾಳಲ್ಲ? ಆ ಶಾರದೆಯ ಮಹಿಮೆ ದೊಡ್ಡದು’ ಎಂದು ನನಗೆ ನಾನೇ ಹೇಳಿಕೊಂಡೆ. ನಂತರ, ಎಲೆ ಎಲೆಗೂ ಹಕ್ಕಿಗಳೇ ಎಂಬುದನ್ನೇ ಮನದಲ್ಲಿಟ್ಟುಕೊಂಡು- ‘ಕಣ ಕಣದೆ ಶಾರದೆ’ ಎಂದು ಒಂದು ಹಾಳೆಯಲ್ಲಿ ಗೀಚಿಕೊಂಡೆ. ನಂತರ, ಆ ಶಾರದಾಂಬೆ, ಮನುಷ್ಯರಿಗೆ ಮಾತ್ರವಲ್ಲ, ಎಲ್ಲ ಪಕ್ಷಿಗಳಿಗೂ ಸಿರಿಕಂಠ ನೀಡಿದ್ದಾಳಲ್ಲ, ಅದು ಸೋಜಿಗವಲ್ಲವೆ? ಹಿಂದೆಯೇ ಕಾಡಿನ ಒಂದು ಮೂಲೆಯಲ್ಲಿ ಹರಿವ ತೊರೆಯ ಸದ್ದಿಗೂ ಒಂದು ಲಯವಿರುತ್ತದೆ. ಇದೂ ಒಂದು ರೀತಿಯಲ್ಲಿ ಆ ದೇವಿಯ ಮಹಿಮೆ ಎನ್ನಿಸಿ ವಿಸ್ಮಯವಾಯಿತು. ಈ ಎರಡೂ ಸಾಲುಗಳನ್ನು ಸೇರಿಸಿ- ‘ವನವನದಲ್ಲೂ ಕುಹುಕುಹು ಗಾನ, ಝರಿ ಝರಿಯಲ್ಲೂ ಜುಳುಜುಳು ಧ್ಯಾನ, ವಿಧವಿಧದಾ ನಾದ ಅವಳು ನುಡಿಸುತಿಹಳು’ ಎಂದು ಬರೆದೆ.
ಹೀಗೆ, ದಿಢೀರನೆ ಕೈಹಿಡಿದ ಸಾಲುಗಳ ಬಗ್ಗೆ ಯೋಚಿಸುತ್ತಿದ್ದಾಗಲೇ ಮನುಷ್ಯರು ಸಂಗೀತವನ್ನು ಹೇಗೆಲ್ಲ ಬಳಸುತ್ತಾರೆ ಎಂದು ನೆನಪು ಮಾಡಿಕೊಂಡೆ: ನಮ್ಮ ಜನ ‘ಹುಟ್ಟಿದಾಗ ಒಂದುಹಾಡು ಕಟ್ತಾರೆ. ಸತ್ತಾಗಲೂ ಒಂದು ಹಾಡು ಹೇಳ್ತಾರೆ’ ಅನ್ನಿಸ್ತು. ಅದನ್ನೇ ‘ಜನನಕೂ ಹಾಡು ಮರಣಕೂ ಹಾಡು’ ಎಂದು ಬದಲಿಸಿಕೊಂಡೆ. ಹಿಂದೆಯೇ- ಪ್ರತಿಯೊಬ್ಬರಿಗೂ ಅವರದೇ ಆದ ರಾಗಮಾಧುರ್ಯವಿದೆ ಅನ್ನಿಸಿತು. ಅದನ್ನು ‘ಪ್ರತಿ ಎದೆಯಾಳದೊಳು…’ ಸಾಲಿನಲ್ಲಿ ತಂದೆ. ಸಂಗೀತಕ್ಕೆ ಜಾತಿ, ಭಾಷೆ, ಮೇಲು ಕೀಳೆಂಬ ಕಟ್ಟುಪಾಡಿಲ್ಲ. ಪರಿಶ್ರಮಿಗಳಿಗೆ ಅದು ಖಂಡಿತ ಒಲಿಯುತ್ತದೆ ಎಂದು ಹೇಳಲು- ‘ಕುಲ ನೆಲದಾಚೆ…’ ಸಾಲು ಬಳಸಿದೆ! ಆಲದ ಮರದಡಿ ಧ್ಯಾನಿಸುತ್ತಾ ಕೂತವನಿಗೆ ಕೆಲವೇ ನಿಮಿಷಗಳಲ್ಲಿ ಹಾಡು ಒಲಿದಿತ್ತು… ನಂತರ ಮನೆಗೆ ಬಂದು ಹಾಡನ್ನು ಇಡಿಯಾಗಿ ‘ಶಾರ್ಪ್’ ಮಾಡಿದೆ. ಹಾಡು ಕಂಡು ಗುರುಕಿರಣ್, ವಿಷ್ಣುವರ್ಧನ್ ತುಂಬ ಖುಷಿಪಟ್ಟರು. ಮುಂದೆ ಚಿತ್ರ ತೆರೆಕಂಡಾಗ ಹಾಡು ಕೇಳಿ ಚಿತ್ರಪ್ರೇಮಿಗಳೂ ಚಪ್ಪಾಳೆ ಹೊಡೆದರು…
ಹೀಗೆನ್ನುತ್ತಾ ಭಾವುಕರಾದರು ಕವಿರಾಜ್. ಅವರ ಕಂಗಳಲ್ಲಿ ಜಗತ್ತು ಗೆದ್ದವನ ಸಂಭ್ರಮವಿತ್ತು….

ವಿಚಿತ್ರ ದಾನಿ ಬುಡಕಟ್ಟು

ಇವ್ರು ದಾನಿ ಬುಡಕಟ್ಟು ಜನರು. ಇಂಡೋನೇಷಿಯಾದ ಪಶ್ಚಿಮ ನ್ಯೂಗಿನಿ ಪ್ರಾಂತ್ಯದವ್ರು. ಅದ್ರಲ್ಲೂ ನ್ಯೂಗಿನಿಯ ಪಪುವ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಾಣಬಹುದು. ಇಲ್ಲಿ ಈ ಮಂದಿ ತುಂಬಾ ವಿಶಾಲವಾಗಿ ಹರಡಿಕೊಂಡಿದ್ದಾರೆ. ಸುಮಾರು 2,50,000ಕ್ಕೂ ಅಧಿಕ ಮಂದಿ ಗುಡ್ಡಪ್ರದೇಶಗಳಲ್ಲಿ ಜೀವಿಸುತ್ತಿದ್ದಾರೆ.
ಮೊದಮೊದಲಿಗೆ ಈ ಜನ್ರೂ ಸಹ ನರಭಕ್ಷಕರಾಗಿದ್ದರಂತೆ. 20ನೇ ಶತಮಾನದ ನಂತರ ಆ ಆಚರಣೆಯಿಂದ ದೂರ ಸರಿದಿದ್ದಾರೆ. ಇವತ್ತು ಕಾಡಿನ ಸಂಪತ್ತನೇ ಬಳಸಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಇವ್ರು ಗುಂಪು ಗುಂಪಾಗಿ ಗುಡಿಸಲುಗಳನ್ನು ನಿರ್ಮಿಸಿಕೊಳ್ತಾರೆ. ಹೀಗೆ ಕಟ್ಟಿಕೊಂಡ ಹಳ್ಳಿ ಅಥವ ಹಾಡಿಯ ಸುತ್ತಾ ಮುಳ್ಳುಬೇಲಿ ಇಲ್ಲವೇ ಕಲ್ಲಿನ ಗೋಡೆಯನ್ನು ರಕ್ಷಣೆಗಾಗಿ ನಿರ್ಮಿಸಿಕೊಂಡಿರುತ್ತಾರೆ.
ದಾನಿ ಬುಡಕಟ್ಟು ಜನರ ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲಿ ಒಂದಷ್ಟು ವಿಶೇಷಣಗಳಿವೆ. ಗಂಡ-ಹೆಂಡತಿ ಒಂದೇ ಗುಡಿಸಲಿನಲ್ಲಿ ಮಲಗುವುದಿಲ್ಲ. ಗಂಡ ಒಂದು ಗುಡಿಸಲಿನಲ್ಲಿ, ಹೆಂಡತಿ ಮತ್ತವನ ಮಕ್ಕಳು ಮತ್ತೊಂದು ಗುಡಿಸಲಲ್ಲಿ ನಿದ್ರಿಸುತ್ತಾರೆ. ಮಗುವಿನ ಜನ್ಮಕೊಟ್ಟ 2ರಿಂದ5 ವರ್ಷದವರೆಗೆ ಹೆಣ್ಣಿಗೆ ಲೈಂಗಿಕತೆ ನಿಷಿದ್ಧ. ಹೀಗೆ ಮಾಡೋದ್ರಿಂದ ಆರೋಗ್ಯವಂತ ಮತ್ತು ಸದೃಢ ಮಕ್ಕಳನ್ನು ಪಡೆಯುಬಹುದೆಂಬ ನಂಬಿಕೆ, ಈ ಜನ್ರದ್ದು. ಗೆಣಸು, ದನಿ ಸಂಸ್ಕೃತಿಯ ಬಹುಮುಖ್ಯ ಅಂಗವಾಗಿ ಬಿಟ್ಟಿದೆ. ಇಂದಿಗೂ ಈ ಮಂದಿ ವಸ್ತುವಿನಿಮಯ ಪ್ರಕಾರವನ್ನೇ ಬಳಸುತ್ತಿದ್ದಾರೆ. ಹಬ್ಬಹರಿದಿನಗಳಾದ್ರಂತು ಹಂದಿಯನ್ನ ಹೆಚ್ಚಾಗಿ ಬಳಸ್ತಾರೆ. ದಾನಿ ಮಂದಿ ಕೃಷಿ ಮಾಡ್ತಾರೆ. ಅದ್ರಲ್ಲೂ ಅವ್ರು ಮುಖ್ಯ ಬೆಳೆ ಗೆಣಸು. ಗೆಣಸೇ ಅವರ ಪಾಲಿಗೆ ಮೃಷ್ಟಾನ್ನ.

ಇದೆಲ್ಲಕಿಂತ ವಿಚಿತ್ರ ಅನಿಸೋದು ಅವರ ಒಂದು ಆಚರಣೆಯಿಂದಾಗಿ. ದಾನಿ ಜನಾಂಗದ ವಿವಾಹಿತೆಯರ ಕೈಬೆರಳುಗಳು ಹುಟ್ಟಿದಾಗಿನಿಂದಲ್ಲೂ ಹೀಗೆಯೇ ಇಲ್ಲ. ಅವರ ಮನೆಯ ಗಂಡಸರು ಸತ್ತಾಗ ನಡೆಯೋ ಸಂಸ್ಕಾರದ ವೇಳೆ ಬೆರಳನ್ನು ಕತ್ತರಿಸುತ್ತಾರೆ. ಹೀಗೆ ಮಾಡೋದ್ರಿಂದ ಮೃತರಾದವರ ಆತ್ಮ ಸಂತೃಪ್ತಿ ಹೊಂದುತ್ತದೆ ಅಂತೆ. ಇಲ್ಲವಾದಲ್ಲಿ ಆತ್ಮ ಮನೆಯ ಹೆಣ್ಣುಮಕ್ಕಳನ್ನು ಕಾಡುತ್ತದೆ ಎಂಬ ನಂಬಿಕೆ ಈ ಜನ್ರದ್ದು. ಇಷ್ಟಾದ್ರೆ ಪರ್ವಾಗಿಲ್ಲ.
ಯಾವೊಬ್ಬ ಗೃಹಿಣಿಗೆ ಮಕ್ಕಳು ಆಗದೇ ಇದ್ದಲ್ಲಿ, ಮಕ್ಕಳಾಗಿ ಸಾಯುತ್ತಲೇ ಇದ್ದಲ್ಲಿ ಮತ್ತೆ ಹುಟ್ಟುವ ಮಗುವಿನ ಕೈ ಬೆರಳುಗಳನ್ನು ತಾಯಿಯೇ ಕಚ್ಚಿ ಹಾಕ್ತಾಳೆ. ಹೀಗೆ ಮಾಡಿದ್ರೆ ಮಗು ಬದುಕುತ್ತೇ ಅನ್ನೋ ಗೊಡ್ಡು ನಂಬಿಕೆ ಈ ಜನ್ರದ್ದು. ಇಷ್ಟಲ್ಲದೇ ಇನ್ನೂ ಹಲವಾರು ಭಯಾನಕ ಆಚರಣೆಗಳನ್ನು ದಾನಿ ಜನಾಂಗದ ಸಂಸ್ಕೃತಿಯಲ್ಲಿ ಕಾಣಬಹುದು.
ಪಪುವ ನ್ಯೂಗಿನಿ ಪ್ರಾಂತ್ಯದಲ್ಲಿರೋ 60 ಲಕ್ಷ ಮಂದಿ ಜನಸಂಖ್ಯೆಯಲ್ಲಿ ದಾನಿ ಜನ್ರು ಇದ್ದಾರೆ. ಅಲ್ಲಿರೋ ಸುಮಾರು 850 ಭಾಷೆಗಳಲ್ಲಿ ದಾನಿ ಭಾಷೆಯೂ ಒಂದು. ಪಪುವ ನ್ಯೂಗಿನಿ 44ಕ್ಕೂ ಅಧಿಕ ಬುಡಕಟ್ಟುಗಳ ಪಾಲಿಗೆ ತೊಟ್ಟಿಲಾಗಿದೆ. ಪಪುವಾ ನ್ಯೂಗಿನಿಯ ರಾಷ್ಟ್ರೀಯ ಹಬ್ಬವೇ ಆಗಿರುವ ಸಿಂಗ್ ಸಿಂಗ್ ಹಬ್ಬದಲ್ಲೂ ದಾನಿ ಜನ್ರ ನೃತ್ಯ ಮತ್ತು ವೇಷಭೂಷಣ ಮೋಹಕವಾಗಿರುತ್ತದೆ.
ಪಪುವ ದ್ವೀಪದ ಎತ್ತರದ ಶ್ರೇಣಿಗಳಲ್ಲಿ ಬದುಕುವ ಈ ಜನ, 20ನೇ ಶತಮಾನದವರೆಗೆ ಆಧುನಿಕ ಸಮಾಜದಿಂದ ಪ್ರತ್ಯೇಕತೆಯನ್ನು ಹೊಂದಿದ್ದರು. ಆದ್ರೀಗ ಕಾಲ ಬದಲಾಗಿದೆ. ಮಕ್ಕಳು ಶಾಲೆಗೆ ಹೋಗ್ತಾರೆ. ದಾನಿ ಭಾಷೆಯ ಬೈಬಲ್ ಕೂಡ ದಾನಿ ಮಂದಿಯ ಕೈ ಸೇರಿದೆ. ಹಾಗಂತ ದಾನಿ ಜನ ತಮ್ಮ ಮೂಲ ಸಂಸ್ಕೃತಿಯನ್ನು ಮರೆತಿಲ್ಲ. ಹೊಸ ಸಂಸ್ಕೃತಿಯನ್ನು ತಿರಸ್ಕರಿಸುತ್ತಿಲ್ಲ.
ಹಾಗೆಯೇ ತಮ್ಮ ಆಚರಣೆಗಳಲ್ಲಿ ಒಂದಷ್ಟು ಮಾರ್ಪಡು ಮಾಡಿಕೊಂಡಿದ್ದಾರೆ. ಅದ್ರಲ್ಲೂ ಮುಖ್ಯವಾಗಿ ಸತ್ತವರ ಮನೆಯ ಹೆಂಗಸರ ಕೈಬೆರಳುಗಳನ್ನು ಕತ್ತರಿಸುವ ವಿಚಾರದಲ್ಲಿ. ಮೊದಮೊದಲು ತಾವಾಗಿಯೇ ಮಹಿಳೆಯರು ಕೈಬೆರಳು ಕತ್ತರಿಸಕೊಳ್ಳುತ್ತಿದ್ದರು. ಆದ್ರೀಗ ಈ ಆಚರಣೆಯನ್ನು ಸ್ವಲ್ಪ ಮಟ್ಟಿಗೆ ತ್ಯಜಿಸಿದ್ದಾರೆ. ಆದ್ರೆ ಈ ಆಚರಣೆ ಪೂರ್ತಿ ಕಡಿಮೆಯಾಗಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಕ್ರೂರ ಆಚರಣೆ ಕಡಿಮೆಯಾಗಬಹುದು.

Wednesday, December 5, 2012

ಒಂದೇ ಒಂದು ರಾತ್ರಿಗೆ ಕೋಟಿ ಎಣಿಸುವ ನಟಿಯರು

ಕೆಲವರೇನೋ ಪ್ರಳಯ ಗ್ಯಾರಂಟಿ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಪ್ರಳಯವೂ ಇಲ್ಲ ಪ್ರಣಯವೂ ಇಲ್ಲ ಎಂಬಂತಿದ್ದಾರೆ. ಈ ಎರಡೂ ಕ್ಯಾಟಗರಿಗೆ ಸೇರದವರ ಪಾಡಂತೂ ಅಯೋಮಯವಾಗಿದೆ. ಇನ್ನೂ ಕೆಲವರಂತೂ 2013ರ ಹೊಸವರ್ಷವನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಹೊಸ ವರ್ಷದ ಸಂಭ್ರಮ ಅಷ್ಟಿಷ್ಟಲ್ಲ ಬಿಡಿ. ಸ್ಟಾರ್ ಹೋಟೆಲುಗಳು, ಕ್ಲಬ್ಬುಗಳು ತಮ್ಮ ಗ್ರಾಹಕರಿಗೆ ಭರ್ಜರಿ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಾಟು ಮಾಡುತ್ತಿವೆ. ಈ ವರ್ಣರಂಜಿತ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ರಸಿಕರು ಮುಗಿಬೀಳುತ್ತಿದ್ದಾರೆ.
ಹತ್ತು ವರ್ಷಗಳ ಹಿಂದೆ ನ್ಯೂ ಇಯರ್ ಕ್ರೇಜ್ ಅಷ್ಟಾಗಿ ಇರಲಿಲ್ಲ. ಈಗ ನ್ಯೂ ಇಯರ್ ಪಾರ್ಟಿ ಇಲ್ಲದೆ ನಡೆಯಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಒಬ್ಬರಿಗಿಂತಲೂ ಒಬ್ಬರು ಸ್ಪರ್ಧೆಗೆ ಬಿದ್ದಂತೆ ಪಂಚತಾರಾ ಹೋಟೆಲ್ ಗಳು ಜೀರೋ ಡೇ ಸಂಭ್ರಮಕ್ಕೆ ಮುಂದಾಗಿವೆ.
ಸ್ಟಾರ್ ನಟಿಯರನ್ನು ಕರೆತಂದು ತಮ್ಮ ಹೋಟೆಲ್ ಗಳಲ್ಲಿ ಕುಣಿಸುವುದು ಸರ್ವೇ ಸಾಮಾನ್ಯವಾಗಿದೆ. ವರ್ಷ ಪೂರ್ತಿ ಚಿತ್ರೀಕರಣದಲ್ಲಿ ಕಳೆಯುವ ಈ ನಟಿಯರೂ ವರ್ಷಾಂತ್ಯಕ್ಕೆ ಪಂಚತಾರಾ ಹೋಟೆಲ್ ಗಳಲ್ಲಿ ಕುಣಿದು ಎರಡು ಮೂರು ತಿಂಗಳಲ್ಲಿ ಸಂಪಾದಿಸುವಷ್ಟು ಹಣವನ್ನು ಒಂದೇ ರಾತ್ರಿ ಸಂಪಾದಿಸುತ್ತಿದ್ದಾರೆ.
ಆ ನಟ್ಟಿರುಳಿನಲ್ಲಿ ಒಂದೇ ಒಂದು ಗಂಟೆ ಕಾಲ ಕುಣಿದರೆ ಸಾಕು. ಅವರವರ ಸಾಮರ್ಥ್ಯಕ್ಕೆ, ಅಂದಚೆಂದ, ವೈಯಾರಕ್ಕೆ ತಕ್ಕಂತೆ ಸಂಭಾವನೆ ಸಿಗುತ್ತದೆ. ಹೋಟೆಲ್ ಗ್ರಾಹಕರಿಗೂ ಕಾಸಿಗೆ ತಕ್ಕ ಕಜ್ಜಾಯ. ಒಟ್ಟಿನಲ್ಲಿ ಜನಮರುಳೋ ಜಾತ್ರ ಮರುಳೋ.
ಕೆಲವು ತಾರೆಗಳಂತೂ ಇಂತಿಷ್ಟು ಕೊಟ್ಟರೆ ಮಾತ್ರ ಕುಣಿಯುವುದಾಗಿ ಡಿಮ್ಯಾಂಡ್ ಮಾಡುತ್ತಾರೆ. ಕೆಲವು ತಾರೆಗಳ ಆ ರಾತ್ರಿ ರೇಟ್ ಹೇಗಿದೆ ಎಂದು ಒಮ್ಮೆ ನೋಡೋಣ ಬನ್ನಿ.



ಕೇವಲ 30 ನಿಮಿಷಕ್ಕೆ ಕತ್ರಿನಾ ರೇಟು ಅಬ್ಬಬ್ಬಾ

ಕೇವಲ ಅರ್ಧ ಗಂಟೆ ತಮ್ಮ ಸೊಂಟವನ್ನು ಕುಣಿಸಲು ಬಾಲಿವುಡ್ ತಾರೆ ಕತ್ರಿನಾ ಕೈಫ್ ಎಷ್ಟು ಚಾರ್ಜ್ ಮಾಡುತ್ತಾರೆ ಗೊತ್ತೇ? ಕೇವಲ ರು.3 ಕೋಟಿ ಅಷ್ಟೇ. ಹಾಗೆ ಬಂದು ಹೀಗೆ ತಮ್ಮ ವೈಯಾರ ತೋರಿ ಮೂರು ಕೋಟಿ ಎಣಿಸಿಕೊಂಡು ಹೋಗುತ್ತಾರೆ.


Light on

ಪ್ರಿಯಾಂಕಾ ಚೋಪ್ರಾ ರೇಟು ಒಸಿ ಜಾಸ್ತಿನೇ

ಸದ್ಯಕ್ಕೆ ಟಾಪ್ 5 ಸ್ಥಾನದಲ್ಲಿರುವ ಪ್ರಿಯಾಂಕಾ ಚೋಪ್ರಾ ಕುಣಿಯಲು ರು.2 ಕೋಟಿ ಡಿಮ್ಯಾಂಡ್ ಮಾಡುತ್ತಾರೆ ಅಷ್ಟೇ. ಪ್ರಿಯಾಂಕಾಗೆ ಏನು ಅಷ್ಟಾಗಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಬರದಿದ್ದರೂ ಮಾಜಿ ಭುವನ ಸುಂದರಿ ಎಂಬ ಕಾರಣಕ್ಕೆ ಸ್ವಲ್ಪ ಕ್ರೇಜ್ ಇದೆ.


Light on

ಬಿಪಾಶಾ ಬಸು ಕೂಡ ಏನು ಕಮ್ಮಿ ಇಲ್ಲ

ಅಬ್ಬಬ್ಬಾ ಬಿಪಾಶಾ ಬಸು ಸಿಕ್ಕಾಪಟ್ಟೆ ಫಾಸ್ಟ್. ಈಗಾಗಲೆ ಅವರು ಪಂಚತಾರಾ ಹೋಟೆಲ್ ಒಂದಕ್ಕೆ ಕಮಿಟ್ ಆಗಿದ್ದಾರೆ. ಕೇವಲ ಅರ್ಧ ಗಂಟೆ ಕುಣಿಯಲು ರು.1 ಕೋಟಿ ತೆಗೆದುಕೊಂಡಿದ್ದಾರೆ. ಕೇವಲ ಒಂದೇ ಹೋಟೆಲ್ ನಲ್ಲಿ ಕುಣಿಯುತ್ತಾರೋ ಇನ್ನೂ ನಾಲ್ಕೈದು ಒಪ್ಪಿಕೊಂಡಿದ್ದಾರೋ ಗೊತ್ತಿಲ್ಲ.

Light on

ಲಾಸ್ಟ್ ಬಟ್ ನಾಟ್ ಲೀಸ್ಟ್ ಸನ್ನಿ ಲಿಯೋನ್

ಈ ವರ್ಷ ಬಾಲಿವುಡ್ ಗೆ ಅಡಿಯಿಟ್ಟ ನೀಲಿ ತಾರೆ ಸನ್ನಿ ಲಿಯೋನ್ ಡಿಸೆಂಬರ್ 31ರ ರಾತ್ರಿಗೆ ಈಗಾಗಲೆ ಸಿದ್ಧವಾಗಿದ್ದಾರೆ. ಅರ್ಧಗಂಟೆ ಕುಣಿಯಲು ಸನ್ನಿ ಲಿಯೋನ್ ಗೆ ಕೇವಲ ರು.26 ಲಕ್ಷ ಕೊಟ್ಟರಾಯ್ತು. ಇವರಿಷ್ಟೇ ಅಲ್ಲದೆ ಇನ್ನೂ ಕೆಲವು ತಾರೆಗಳು ರು.10 ರಿಂದ 20 ಲಕ್ಷಗಳ ನಡುವೆ ವ್ಯವಹಾರ ಕುದುರಿಸಿಕೊಳ್ಳುತ್ತಾರೆ.